Monday, March 30, 2015

ಬೇಟಿ ಪಢಾವೋ; ಬೇಟಿ ಬಚಾವೋ ಆಂದೋಲನಕ್ಕೆ ಚಾಲನೆ [KANNADA PRABHA]

ಕನ್ನಡಪ್ರಭ


ಹೆಣ್ಣು ಮಕ್ಕಳ ರಕ್ಷಣೆಗೆ ಭಿಕ್ಷೆ ಬೇಡಿದ ಪ್ರಧಾನಿ!

ಬೇಟಿ ಪಢಾವೋ; ಬೇಟಿ ಬಚಾವೋ ಆಂದೋಲನಕ್ಕೆ ಚಾಲನೆ
Prime Minister Narendra Modi at the Beti Bachao Beti-Padhao programme in Panipat (PC: PTI)
`ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನಕ್ಕೆ ಚಾಲನೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (ಕೃಪೆ : ಪಿಟಿಐ)
ನವದೆಹಲಿ: ಹೆಣ್ಣು ಮಕ್ಕಳ ಜೀವವನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಿ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯಾಗಿ ನಾನು ನಿಮ್ಮ ಮುಂದೆ  ಭಿಕ್ಷೆ ಬೇಡುತ್ತಿದ್ದೇನೆ.
ಇದು ಹರ್ಯಾಣ ದ ಪಾಣಿಪತ್‍ನಲ್ಲಿ `ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಿದ ಮಾತು.
ಹೆಣ್ಣು ಭ್ರೂಣ ಹತ್ಯೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು.
ನಾವೀಗ 21ನೇ ಶತಮಾನದಲ್ಲಿದ್ದೇವೆ ಎಂದು ಹೇಳಲೇ ನಾಚಿಕೆಯಾಗುತ್ತದೆ. ಹೆಣ್ಣು ಶಿಶುವನ್ನು ಭ್ರೂಣದಲ್ಲೇ ಕೊಲ್ಲುವ ಮೂಲಕ 18ನೇ ಶತಮಾನದಲ್ಲಿರುವಂತೆ
ಕಾಣುತ್ತಿದ್ದೇವೆ. ನೆನಪಿರಲಿ ಹೆಣ್ಣು ಮಕ್ಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಪ್ರತಿಭಾನ್ವಿತರು. ನಿಮಗೆ ಸಾಕ್ಷಿ ಬೇಕಿದ್ದರೆ, ಅವರ ಪರೀಕ್ಷೆಯ ಫಲಿತಾಂಶವನ್ನೇ ಗಮನಿಸಿ.
ಜನ ತಮ್ಮ ಸೊಸೆ ಹೆಚ್ಚು ಓದಿರಬೇಕು ಎಂದು ಬಯಸುತ್ತಾರೆ. ಆದರೆ, ತಮ್ಮ ಮಗಳನ್ನೇಕೆ ಓದಿಸುವುದಿಲ್ಲ ಎಂದೂ ಪ್ರಶ್ನಿಸಿದರು.
ಹರಿಯಾಣದ ಸಮೀಪದಲ್ಲಿ ಕೊಳವೆ ಬಾವಿಗೆ ಪ್ರಿನ್ಸ್ ಎಂಬ ಬಾಲಕ ಬಿದ್ದಾಗ ಟಿವಿ ಮುಂದೆ ಕುಳಿತು ಕೋಟ್ಯಂತರ ಮಂದಿ ಪ್ರಾರ್ಥನೆ ಮಾಡುತ್ತೀರಿ. ಆದರೆ, ಪ್ರತಿದಿನ
ಸಾವಿರಾರು ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಈ ಬಗ್ಗೆ ಯಾರಾದರೂ  ಯೋಚಿಸಿದ್ದೀರಾ ಎಂದು ಕೇಳಿದರು.


ಹೆಣ್ಣುಮಕ್ಕಳಿಗೆ `ಸುಕನ್ಯಾ ಸಮೃದ್ಧಿ '

ಆಂದೋಲನದ ಉತ್ತೇಜನಕ್ಕಾಗಿ ಪ್ರಧಾನಿ ಮೋದಿ ಅವರು ಸಣ್ಣ ಹೂಡಿಕೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಶೇ. 9.1 ಬಡ್ಡಿ ನೀಡುವುದರ ಜತೆಗೆ ತೆರಿಗೆ ವಿನಾಯಿತಿಯನ್ನು ಪಡೆಯುವ ಸೌಲಭ್ಯ ನೀಡಲಾಗಿದೆ. ಇದಕ್ಕೆ `ಸುಕನ್ಯಾ ಸಮೃದ್ಧಿ ಖಾತೆ' ಎಂದು ಹೆಸರಿಡಲಾಗಿದೆ. ಹೆಣ್ಣು ಮಗು ಹುಟ್ಟಿದಾಗಿನಿಂದ 10 ವರ್ಷವಾಗುವುದರೊಳಗೆ ಯಾವಾಗ ಬೇಕಾದರೂ ಹಣವನ್ನೂ ಠೇವಣಿ ಇಡಬಹುದಾಗಿದೆ. ರು. 1000-ರು. 1.5 ಲಕ್ಷ ವರೆಗೆ ಠೇವಣಿ ಇಡಬಹುದು.

  •  ಯಾವುದೇ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೇಕಾದರೂ ಖಾತೆ ತೆರೆಯಬಹುದು.
  •  ಕುಟುಂಬದ ಉಳಿತಾಯದಲ್ಲಿ ಗಂಡು ಮಗುವಿನಂತೆ ಹೆಣ್ಣು ಮಗುವಿಗೂ ಸಮಪಾಲು ಸಿಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ  ಜಾರಿ.
  • ಈ ಹೆಣ್ಣು ಮಗುವಿಗೆ 21 ವರ್ಷ ಆಗುವವರೆಗೆ ಹಣವನ್ನು ಪಡೆಯಲು ಸಾಧ್ಯವಿಲ್ಲ. ಇಲ್ಲವೇ ಆಕೆಗೆ 18 ವರ್ಷ ತುಂಬಿದ ಬಳಿಕ ವಿವಾಹ ಕಾರಣಕ್ಕೆ ಠೇವಣಿ ಹಿಂಪಡೆಯಬಹುದು.
  •  ಆಕೆಯ ಉನ್ನತ ಶಿಕ್ಷಣದ ಸಲುವಾಗಿ ಬಳಸುವ ಸಂದರ್ಭ ಬಂದರೆ, ಈ ಠೇವಣಿಯಲ್ಲಿ ಶೇ. 50ರಷ್ಟನ್ನು ಮಾತ್ರ ಪಡೆಯಬಹುದು.
  •  18 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ ವಿವಾಹ ಮಾಡುವುದನ್ನು ತಡೆಯವುದೂ ಇದರ ಹಿಂದಿನ ಉದ್ದೇಶ.


ಮಾಧುರಿಗೆ ಶ್ಲಾಘನೆ

`ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನಕ್ಕೆ ರಾಯಭಾರಿಯಾಗಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಮಾಧುರಿಯವರ ತಾಯಿ ತೀವ್ರ ಅನಾರೋಗ್ಯದಿಂದ ಐಸಿಯುನಲ್ಲಿದ್ದಾರೆ. ಆದರೂ ಕಾರ್ಯಕ್ರಮಕ್ಕೆ ಬಂದಿರುವುದು ಅವರ ಕಾರ್ಯತತ್ಪರತೆ ತೋರಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

No comments:

Post a Comment